


4th August 2026
ಬೆಳಗಾವಿ :
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2026ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಆಗಸ್ಟ್ 24 ಮತ್ತು 25ರಂದು ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಣ್ಣಿಕೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ( ಸಿಆರ್ಪಿ ) ಎಸ್. ಎಸ್. ಪಾಟೀಲ ತಿಳಿಸಿದರು.
ಅವರು ಮಂಗಳವಾರ ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಆಗಸ್ಟ್ 24ರಂದು ಅಥ್ಲೆಟಿಕ್ಸ್ (ಮೇಲಾಟಗಳು) ಸ್ಪರ್ಧೆಗಳು ಹಾಗೂ ಆಗಸ್ಟ್ 25ರಂದು ಗುಂಪು ಆಟಗಳ ಸ್ಪರ್ಧೆಗಳು ನಡೆಯಲಿವೆ. ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಶಿಕ್ಷಕರು ಸಮನ್ವಯದಿಂದ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಅಥ್ಲೆಟಿಕ್ಸ್ ಹಾಗೂ ಗುಂಪು ಆಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಹೆಸರನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕ ಪೂರ್ವ ನೋಂದಣಿ ಮಾಡಿಸಬೇಕು. ಅಲ್ಲದೆ, ಆಗಸ್ಟ್ 17ರೊಳಗೆ ಕ್ಲಸ್ಟರ್ನ ಎಲ್ಲಾ ಕ್ರೀಡಾಪಟುಗಳ ಪಟ್ಟಿಯನ್ನು ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹಣ್ಣಿಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ವಿ. ಸಿ. ಅಡಕಿ, ಬಿ. ಎಂ. ಕಡೋಲಕರ ಹಾಗೂ ಪಿ. ಎಂ. ಜೋರಾಪುರ ಮಾತನಾಡಿದರು. ಎಸ್. ಬಿ. ಲಠ್ಠೆ ಸ್ವಾಗತಿಸಿದರು.
ಸಭೆಯಲ್ಲಿ ಆರ್. ಬಿ. ಮಲ್ಲೂರ, ಪ್ರಕಾಶ ನಾಯ್ಕರ, ಬಿ. ಎಲ್. ಇಂಚಲ, ಎಂ. ವಿ. ಪಾಟೀಲ, ಓ. ಎಸ್. ಚಿಕ್ಕಲದೀನಿ ಆರ್. ಎಫ್. ಪಾಟೀಲ ಸೇರಿದಂತೆ ಹಣ್ಣಿಕೇರಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರ *ಫೋಟೋ ಶಿರ್ಷಕ್*:.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಬಾಭವನದಲ್ಲಿ ನಡೆದ ದೈಹಿಕ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಹಣ್ಣಿಕೇರಿ ಸಿಆರ್ಪಿ ಎಸ.ಎಸ್. ಪಾಟೀಲ ಅವರು ಮಾತನಾಡಿದರು.

29th July 2026
:
ಬೈಲಹೊಂಗಲ- ನಗರದ ಶಾಸಕರ ಮಾದರಿ ಶಾಲೆ ನಂ. 4ರಲ್ಲಿ ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ಗ್ರೇಡ್–2 ದೈಹಿಕ ಶಿಕ್ಷಕರ ಸಂಘದ ಬೈಲಹೊಂಗಲ ತಾಲೂಕು ಘಟಕದ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ದೈಹಿಕ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘದ ಅಭಿವೃದ್ಧಿ, ಶಿಕ್ಷಕರ ಹಿತಾಸಕ್ತಿ, ಕ್ರೀಡಾ ಚಟುವಟಿಕೆಗಳ ಉತ್ತೇಜನ, ಶಾಲಾ ಮಟ್ಟದ ಕ್ರೀಡಾಕೂಟಗಳ ಯಶಸ್ವಿ ಅನುಷ್ಠಾನ ಹಾಗೂ ಸಂಘದ ಮುಂದಿನ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರೇಡ್–2 ದೈಹಿಕ ಶಿಕ್ಷಕರ ಸಂಘದ ಬೈಲಹೊಂಗಲ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ (ಅವಿರೋಧವಾಗಿ) ನಡೆಸಲಾಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭ ಹಾರೈಸಿದರು.
ಸಭೆಯಲ್ಲಿ ಸಂಘದ ಹಿರಿಯರು, ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಭಾಗವಹಿಸಿದ್ದರು. ಸಭೆಯು ಆತ್ಮೀಯ ಹಾಗೂ ಯಶಸ್ವಿಯಾಗಿ ನಡೆಯಿತು. ...... ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್–2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ. ಎಸ್. ಹಲಕಿ ಅವರ ಅಧ್ಯಕ್ಷತೆಯಲ್ಲಿ ಬೈಲಹೊಂಗಲ ತಾಲ್ಲೂಕು ಘಟಕವನ್ನು ಅಧಿಕೃತವಾಗಿ ರಚಿಸಲಾಯಿತು. ............................................................................. ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ
ಪ್ರಾಥಮಿಕ ಶಾಲಾ ಗ್ರೇಡ್–2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ.)
ತಾಲೂಕು ಘಟಕ ಬೈಲಹೊಂಗಲ
ಪದಾಧಿಕಾರಿಗಳು
1. ಶ್ರೀ ಮಹಾಂತೇಶ ಬಿ. ಮುರಗೋಡ – ಗೌರವ ಅಧ್ಯಕ್ಷರು
2. ಶ್ರೀ ಜಿ. ಎಸ್. ಬಸನಗೌಡರ – ಅಧ್ಯಕ್ಷರು
3. ಶ್ರೀಮತಿ ಎಸ್. ಎಂ. ಹುಬ್ಬಳ್ಳಿ – ಉಪಾಧ್ಯಕ್ಷರು
4. ಶ್ರೀ ಬಿ. ಎಸ್. ಜಕಾತಿ – ಪ್ರಧಾನ ಕಾರ್ಯದರ್ಶಿ
5. ಶ್ರೀ ಎ. ಎಸ್. ಬಸರಿಕಟ್ಟಿ – ಖಜಾಂಚಿ
6. ಶ್ರೀ ಎ. ಆರ್. ಸುಂಕದ – ಸಹ ಕಾರ್ಯದರ್ಶಿ
7. ಶ್ರೀ ಎಸ್. ಎ. ಪೆಂಡಾರಿ – ಸಂಘಟನಾ ಕಾರ್ಯದರ್ಶಿ
8. ಶ್ರೀಮತಿ ಎಂ. ಕೆ. ಮುದಮ್ಮನಗೇರಿ – ಮಹಿಳಾ ಕಾರ್ಯದರ್ಶಿ
ನಿರ್ದೇಶಕರು
1. ಶ್ರೀ ಎಸ್. ಜಿ. ಹಿರೇಮಠ – ನಿರ್ದೇಶಕರು
2. ಶ್ರೀ ಎಸ್. ಎಸ್. ತಳವಾರ – ನಿರ್ದೇಶಕರು
3. ಶ್ರೀ ಆರ್. ಎಸ್. ರಾಹುತನ್ನವರ – ನಿರ್ದೇಶಕರು
4. ಶ್ರೀ ಎಂ. ಪಿ. ಕುರಿ – ನಿರ್ದೇಶಕರು
5. ಶ್ರೀ ಎಸ್. ಡಿ. ಲಮಾಣಿ – ನಿರ್ದೇಶಕರು
6. ಶ್ರೀಮತಿ ಬಿ. ವಾಯ್. ಶಿಂತ್ರಿ – ನಿರ್ದೇಶಕರು

23rd July 2026
*ಬೆಳಗಾವಿ, ಜು. 23*: *ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸುವ ನೆಪದಲ್ಲಿ* *ಕೆಲವರು ದೇಶದ ಪ್ರಧಾನಮಂತ್ರಿಯವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಕಿರಣ ಜಾಧವ್ ಹೇಳಿದ್ದಾರೆ*.
*ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಇದೆ. ಆದರೆ, ವೈಯಕ್ತಿಕ ನಿಂದನೆ, ಅವಹೇಳನಕಾರಿ ಹೇಳಿಕೆಗಳು ಹಾಗೂ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳ ಬಗ್ಗೆ ಅಗೌರವ ತೋರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ತಿಳಿಸಿದ್ದಾರೆ*.
*ನೀಟ್ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಶೀಘ್ರದಲ್ಲೇ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ, ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದತ್ತ ಹೆಚ್ಚಿನ ಗಮನಹರಿಸಬೇಕು. ಪಾಲಕರು ಕೂಡ ಮಕ್ಕಳನ್ನು ರಾಜಕೀಯ ಪ್ರಚೋದನೆಗಳಿಂದ ದೂರವಿರಿಸಿ, ಅವರ ಶಿಕ್ಷಣ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡುವಂತೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದಾರೆ*.
*ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನಗಳು ಆತಂಕಕಾರಿ ಬೆಳವಣಿಗೆಯಾಗಿವೆ. ಯಾವುದೇ ನ್ಯಾಯಯುತ ಬೇಡಿಕೆಗಳಿದ್ದರೂ ಅವುಗಳನ್ನು ಕಾನೂನುಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಮಂಡಿಸಬೇಕು. ದೇಶವಿರೋಧಿ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬಾರದು ಎಂದು ಅವರು ಕರೆ ನೀಡಿದ್ದಾರೆ*.
*ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ಯುವಜನರ ಪ್ರಮುಖ ಕರ್ತವ್ಯವಾಗಿದೆ. ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುವ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಯಾವುದೇ ಪ್ರಯತ್ನ ಖಂಡನೀಯ ಎಂದು ಕಿರಣ ಜಾಧವ್ ತಿಳಿಸಿದ್ದಾರೆ*.................

23rd July 2026
ಬೆಳಗಾವಿ ::ಬೈಲಹೊಂಗಲ ತಾಲೂಕಿನ
ತಾಲೂಕಿನ ಹಳ್ಳಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೈಲಹೊಂಗಲದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಹಿರೇಮಠ್ ಶಿಕ್ಷಣ ಸಂಯೋಜಕ ಮಹೇಶ್ ಯರಗಟ್ಟಿ ಹಾಗೂ ಹಣ್ಣಿಕೇರಿ ಸಿಆರ್ಪಿ S. S.ಪಾಟೀಲ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಅಲ್ಲದೆ, ಕಾಮ್ಸ್ (KAAMS) ಹಾಗೂ ನಿರಂತರ ವಿದ್ಯಾರ್ಥಿ ಹಾಜರಾತಿ ಕುರಿತು ಅಗತ್ಯ ಸಲಹೆ–ಸೂಚನೆಗಳನ್ನು ನೀಡಿದರು. ನಂತರ ಶಾಲೆಯ ಗ್ರಂಥಾಲಯ (ಲೈಬ್ರರಿ) ಮತ್ತು ಕ್ರೀಡಾ ಕೊಠಡಿಯನ್ನು ವೀಕ್ಷಿಸಿ, ಅವುಗಳ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಶಾಲೆಯ ಅಡುಗೆ ಸಿಬ್ಬಂದಿಯವರಿಗೆ ಸಮಯ ಪಾಲನೆ, ಅಡುಗೆಮನೆಯ ಸ್ವಚ್ಛತೆ, ದಿನಾಲು ಸಮವಸ್ತ್ರ ಹಾಕುವುದು ಹಾಗೂ ಆಹಾರದ ವ್ಯರ್ಥವನ್ನು ತಡೆಗಟ್ಟುವ ಕುರಿತು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.. ಮುಖ್ಯ ಶಿಕ್ಷಕ ಎನ್.ಎನ್ ಜೋಳದ ಸ್ವಾಗತಿಸಿದರು ಈ ವೇಳೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು

23rd July 2026
ಬೆಳಗಾವಿ- ತಾಲೂಕಿನ ಶಿಂದೊಳ್ಳಿ ಗ್ರಾಮದ ಸಮಾಜ ಸೇವಕರು, ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರಯ್ಯ ಬಾಬು ಪೂಜಾರ ಇವರು "ಹಳ್ಳಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ" ಎಂದು ಅರಿತು "ದೇಶ ಸೇವೆಯೇ ಈಶ ಸೇವೆ" ಎಂದು ಮನಗೊಂಡು ಗ್ರಾಮದ ಸುಧಾರಣೆಗೆ ತಮ್ಮ ಕೈಲಾದ ಸೇವೆ ಮಾಡುತ್ತಿರುವ ಇವರು ಶಿಕ್ಷಣ ಪ್ರೇಮಿಯೂ ಹೌದು, ದೇಶ ಪ್ರೇಮಿಯೂ ಹೌದು.
ವೀರಭದ್ರಯ್ಯ ಇವರಿಗೆ ಶಿಂದೊಳ್ಳಿ ಗ್ರಾಮದ ಜನತೆಯು ಪ್ರೀತಿಯಿಂದ ಕರೆಯುವ ಹೆಸರು ಈರಣ್ಣ ಅಥವಾ ಈರಯ್ಯ ಎಂದು, ಶಿಂದೊಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರ ಮಗನಾಗಿ, ಬಡ ರೈತ ಕುಟುಂಬದಿಂದ ಬೆಳೆದು ಬಂದು 2002 ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಾಗಿ ಅಧಿಕೃತ ರಾಜಕೀಯ ಪ್ರವೇಶ ಪಡೆದು ಬೂತ್ ಮಟ್ಟದಲ್ಲಿ ಅಂದಿನ ಶಿಂದೊಳ್ಳಿ ಗ್ರಾಮದ ಹಿರಿಯ ಕಾರ್ಯಕರ್ತರು ಹೇಳಿದಲ್ಲಿ ಭಿತ್ತಿಪತ್ರಗಳನ್ನು ಅಂಟಿಸುವುದು, ಕರಪತ್ರಗಳನ್ನು ಮನೆ ಮನೆಗೆ ವಿತರಿಸುವುದು, ಪಕ್ಷದ ಧ್ವಜ ಕಟ್ಟುವುದು, ಆಗಿನ ಬಟ್ಟೆಯ ಬ್ಯಾನರ್ ಗಳನ್ನು ಊರಿನಲ್ಲಿ ಕಟ್ಟುವುದು ಖುಷಿಯ ಸಂಗತಿಯಾಗಿರುತ್ತಿತ್ತು ಎನ್ನುವ ಇವರು ಪಕ್ಷ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಮಾಡುತ್ತ, ಬಾಗೇವಾಡಿ ವಿಧಾನಸಭಾ ಮತಕ್ಷೇತ್ರವಿದ್ದ ಸಮಯದಿಂದ ಇಲ್ಲಿಯವರೆಗೆ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಾಗಿ ಶಕ್ತಿ ಕೇಂದ್ರ ಪ್ರಮುಖರಾಗಿ, ಮಹಾಶಕ್ತಿ ಕೇಂದ್ರ ಪ್ರಮುಖರಾಗಿ, ಬೆಳಗಾವಿ ಗ್ರಾಮೀಣ ಮಂಡಲದ ಸಾಮಾಜಿಕ ಜಾಲತಾಣದ ಪ್ರಮುಖರಾಗಿ, ಬೆಳಗಾವಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾಗಿ, ಬಿಜೆಪಿಯ ವಿವಿಧ ಅಭಿಯಾನಗಳ ಸಂಚಾಲಕ ಹಾಗೂ ಸಹ ಸಂಚಾಲಕರಾಗಿ, ಪ್ರಸ್ತುತ ಬಿಜೆಪಿಯ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪ್ರಶಿಕ್ಷಣ ಪ್ರಕೋಷ್ಟದ ಸಹ-ಸಂಚಾಲಕರಾಗಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಂಘಟನೆ ಕಾರ್ಯ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರಾದ ಸಂಜಯ ಪಾಟೀಲ, ಜಗದೀಶ ಶೆಟ್ಟರ, ಈರಣ್ಣ ಕಡಾಡಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಮಹಾಂತೇಶ ಕವಟಗಿಮಠ, ಸಾಬಣ್ಣ ತಳವಾರ, ಹಣಮಂತ ನಿರಾಣಿ, ಮಹೇಶ್ ಟೆಂಗಿನಕಾಯಿ, ಅನಿಲ ಬೆನಕೆ, ವಿಠಲ ಹಲಗೇಕರ, ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ, ಸುಭಾಸ ಪಾಟೀಲ, ಬಸವರಾಜ ಯಂಕಂಚಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಡಾ. ರವಿ ಪಾಟೀಲ ಹೀಗೆ ಅನೇಕ ಹಿರಿಯ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಶಿಂದೊಳ್ಳಿಯ ಹಿರಿಯರು ಹಾಗೂ ಯುವಕರೊಂದಿಗೆ ಒಳ್ಳೆಯ ಸ್ನೇಹಮಯ ಬಾಂಧವ್ಯ ಹೊಂದಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿಯವರು ಕೂಡ ಇವರ ಸಂಘಟನೆಯಲ್ಲಿನ ಪಾಲ್ಗೊಳ್ಳುವಿಕೆ ಹಾಗೂ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರೊಂದಿಗೆ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೀರಭದ್ರಯ್ಯ ಇವರು ಅಧಿಕಾರಿಗಳ ಜೊತೆ, ಕಛೇರಿಯ ಸಿಬ್ಬಂದಿಗಳ ಜೊತೆ ಸತತ ಸಂಪರ್ಕ ಹಾಗೂ ಫಾಲೋ-ಅಪ್ ಮೆಚ್ಚುವಂತದ್ದಾಗಿರುತ್ತದೆ.
ಶಿಂದೊಳ್ಳಿ-ನಿಲಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾವಣೆಯಲ್ಲಿ ಗೆದ್ದುಬಂದು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಸರ್ಕಾರಿ ಯೋಜನೆಗಳನ್ನು ತಮ್ಮ ಶಿಂದೊಳ್ಳಿ ಗ್ರಾಮಕ್ಕೆ ಹೇಗೆಲ್ಲಾ ತರಬಹುದು ಯಾವ ಯೋಜನೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎನ್ನುವ ತಮ್ಮ ಅನೇಕ ಅಭಿವೃದ್ಧಿ ವಿಚಾರಗಳನ್ನು ಹಲವು ಬಾರಿ ಪಂಚಾಯಿತಿ ಸಭೆಗಳಲ್ಲಿ ಹಾಗೂ ಪಂಚಾಯಿತಿ ಸದಸ್ಯರು ಒಂದೆಡೆ ಸೇರಿದ ಸಂದರ್ಭದಲ್ಲಿ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ, ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗುವ ಮುಂಚೆ ಮತ್ತು ನಂತರ ಗ್ರಾಮದ ಜನತೆಯ, ರಾಜಕೀಯ ಮುಖಂಡರ ಹಾಗೂ ಕಾರ್ಯಕರ್ತಸ್ನೇಹಿತರ ಸಹಕಾರದಲ್ಲಿ ತಮ್ಮ ರಾಜಕೀಯ ಜೀವನದ 25 ವರ್ಷಗಳಲ್ಲಿ ಶಿಂದೊಳ್ಳಿ ಗ್ರಾಮ ವ್ಯಾಪ್ತಿಯ ಶಾಸಕರಿಂದ, ವಿಧಾನ ಪರಿಷತ್ ಸದಸ್ಯರಿಂದ, ರಾಜ್ಯಸಭಾ ಹಾಗೂ ಲೋಕಸಭಾ ಸಂಸದರಿಂದ, ಗ್ರಾಮ ಪಂಚಾಯಿತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೊಟ್ಯಾಂತರ ರೂಪಾಯಿ ಅನುದಾನ ಶಿಂದೊಳ್ಳಿಗೆ ತರಲು ಶ್ರಮವಹಿಸಿದ್ದಾರೆ. ಶಿಂದೊಳ್ಳಿ ಗ್ರಾಮದಲ್ಲಿ ಸಂಪರ್ಕ ರಸ್ತೆಗಳ ಸುಧಾರಣೆಗಾಗಿ, ಗ್ರಾಮದ ಒಳರಸ್ತೆಗಳ ಅಭಿವೃದ್ಧಿಗಾಗಿ, ಗಟಾರುಗಳ ನಿರ್ಮಾಣಕ್ಕಾಗಿ, ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಸಾಮಗ್ರಿಗಳು ಹಾಗೂ ಡೆಸ್ಕ್ ಗಳ ವಿತರಣೆಗಾಗಿ, ಸಾಂಸ್ಕೃತಿಕ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಹೀಗೆ ಅನೇಕ ವಿಧವಾದ ಅಭಿವೃದ್ಧಿ ಕಾರ್ಯಗಳಿಗೆ, ಸಂಬಂಧಿಸಿದ ಜನಪ್ರತಿನಿಧಿಗಳಿಂದ ಹಾಗೂ ಗ್ರಾಮ ಪಂಚಾಯಿತಿಯಿಂದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ, ಇವರು ಸರ್ಕಾರಗಳ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿದ್ದಾರೆ. ಕೋರೋಣ ಹಾಗೂ ಅತೀವೃಷ್ಟಿ ಕಾಲಘಟ್ಟದ ಸಮಯದಲ್ಲಿ ಸರ್ಕಾರದ ಇಲಾಖೆಯಿಂದ ಹಾಗೂ ವಿವಿಧ ಸಂಘಸಂಸ್ಥೆಗಳಿಂದ, ಅನೇಕ ಮಹನೀಯರಿಂದ ನೀಡುವ ಆಹಾರ ಸಾಮಗ್ರಿಗಳನ್ನು ಬಡವರಿಗೆ, ನಿರ್ಗತಿಕರಿಗೆ ತಲುಪಿಸಿದ್ದಾರೆ, ಗ್ರಾಮದ ಜನತೆಗೆ ವಿವಿಧ ಆಸ್ಪತ್ರೆಗಳಳಿಂದ ಹಲವಾರು ಬಾರಿ ಉಚಿತ ಆರೊಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿದ್ದಾರೆ.
ವೀರಭದ್ರಯ್ಯ ಪೂಜಾರ ಇವರಿಂದ ಸಮಾಜ ಸೇವೆ ಹಾಗೂ ಶಿಂದೊಳ್ಳಿ ಗ್ರಾಮದ ಅಭಿವೃದ್ಧಿಯ ಕಾರ್ಯಗಳು ಸದಾ ಹೀಗೆ ಮುಂದುವರಿಯಲಿ, ಇವರಿಗೆ ದೇವರು ಉತ್ತಮ ಆರೋಗ್ಯ, ಹೆಚ್ಚಿನ ಆಯುಷ್ಯ ಕರುಣಿಸಲಿ, ಮುಂದಿನ ದಿನಗಳಲ್ಲಿ ರಾಜಕೀಯದ ಉನ್ನತ ಹುದ್ದೆಗಳು ಇವರಿಗೆ ಸಿಗಲಿ ಎಂದು ಇವರ ಹಿತೈಷಿಗಳು ಶುಭ ಹಾರೈಸಿದ್ದಾರೆ.

14th July 2026
ಬೆಳಗಾವಿಯ ಮಹಾಂತೇಶ ನಗರದ ಸಂಗೀತ ಕಲಾ ತಂಡದ ವತಿಯಿಂದ ಪಂಚ ಭಾಷೆಗಳ ಪ್ರಖ್ಯಾತ ಗಾಯಕಿ ಡಾ. ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಅವರು, ಭಾರತ ಕಂಡ ಅಪರೂಪದ ಕೋಗಿಲೆ ಕಂಠದ ಗಾಯಕಿ ಡಾ. ಎಸ್. ಜಾನಕಿ ಅವರು ಅದ್ಭುತ ಭಾಷಾ ಪಾಂಡಿತ್ಯ ಹಾಗೂ ತೀಕ್ಷ್ಮ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು. ಪಂಚ ಭಾಷೆಗಳ ಪರಿಣಿತಿಯೊಂದಿಗೆ ಎಲ್ಲಾ ಸನ್ನಿವೇಶ ಮತ್ತು ಪಾತ್ರಗಳಿಗೆ ಜೀವ ತುಂಬಿದ ಅವರು, ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಭಾವನಾತ್ಮಕವಾಗಿ ಭಾರತದ ಉದ್ದಗಲಕ್ಕೂ ಅಮರರಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ಈ ವೇಳೆ ನಗರದ ಪ್ರಮುಖ ಕಲಾವಿದರು ಹಾಗೂ ಗಣ್ಯರಾದ ಚಂದ್ರಕಾಂತ್ ಅಪ್ಪಣ್ಣನವರ್, ಬಿ. ಎ. ಪಾಟಿಲ್, ಭೀಮಪ್ಪ ಗವನಾಳೆ, ಡಾ. ಬಿ. ಎಸ್. ಗಂಗನಹಳ್ಳಿ, ಕುಮಾರಿ ಗಂಗನಹಳ್ಳಿ, ಡಾ. ಅ. ಬ. ಇಟಗಿ, ನಿಖಿಲ್ ಮೆಣಸಿನಕಾಯಿ, ರಾಜು ಕಣ್ಣಪ್ಪನವರು, ವಿಜಯ್ ಕುಮಾರ್ ನೆರಳೇಕರ್ ಹಾಗೂ ಶಬರಿ ಹೋಟೆಲ್ ಮಾಲಕರಾದ ಜಯನಾಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಅಗಲಿದ ಚೇತನಕ್ಕೆ ಆದರಾಂಜಲಿ ಅರ್ಪಿಸಿದರು.

9th July 2026
ಬೆಂಗಳೂರು- ಶ್ರೀ ಅನ್ನಪೂರ್ಣೆಶ್ವರಿ ಭಜನಾ ಮಂಡಳಿ( ರಿ) ಮತ್ತು ಜನ ಸೇವಾ ಟ್ರಸ್ಟ (ರಿ) ವತಿಯಿಂದ ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ದಿ. ೧೨ ರಂದು ೧೦.೩೦ ಕ್ಕೆ ಬೆಂಗಳೂರಿನ ಮಂಜುನಾಥ ನಗರದ ಶ್ರೀ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸಾನಿಧ್ಯವನ್ನು ಡಿಗ್ಗೇವಾಡಿಯ ಡಾ.ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು ವಹಿಸುವರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ.ತಿಮ್ಮಯ್ಯ, ಮಾನವ ಹಕ್ಕು ಮಂಡಳಿ ರಾಜ್ಯ ಅಧ್ಯಕ್ಷ ಸಾಧಿಕ ಶರೀಪ್, ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಅರೀಪ್,ಅ.ಭ.ಮಂಡಳಿ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಪೂರ್ಣಿಮಾ ಬಾಬು, ಜನಸೇವಾ ಟ್ರಸ್ಟ ಅಧ್ಯಕ್ಷ ಜಿ.ಬಿ.ಇಂದುಮತಿ, ಜನಸೇವಾ ಟ್ತಸ್ಟ ಕಾರ್ಯದರ್ಶಿ ಜಿ.ಬಿ.ಭಾರ್ಗವಿ ಪಾಲ್ಗೊಳ್ಳುವರು. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ 2026 'ನೇ ಸಾಲಿನ ಪ್ರಶಸ್ತಿಯನ್ನು ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು,ಶ್ರೀ ದೇವೇಂದ್ರ ಆಚಾರ್,ಶ್ರೀ ಭೀಮಶಿ ಪುಂ ಕೆಂಪವ್ವಗೋಳ,ಶ್ರೀ ಕೃಷ್ಣ ಗುರೂಜಿ,ಶ್ರೀ ಕೆಂಪಣ್ಣ ಈ ಪಾಟೀಲ್,ಶ್ರೀ ಗಂಗನಗೌಡ ಪಾಟೀಲ್,ಶ್ರೀ ಲಕ್ಕಪ್ಪ ಸಿ ಕೊಡ್ಲಿ,
ಶ್ರೀ ಮಂಜುನಾಥ್ ತರೀಕೆರೆ,ಶ್ರೀ ಸಾಧಿಕ್ ಶರೀಫ್,ಶ್ರೀ ಚೆನ್ನಮಲ್ಲಪ್ಪ ಮೆಣಸಿನಕಾಯಿ, ಶ್ರೀ ಅರೀಪ್ ಬಿರೂರು,ಶ್ರೀ ಎಂ ನಿಂಗರಾಜು,ಶ್ರೀ ಆನಂದ ಸಿ ತಿರುಮಲ,ಶ್ರೀಮತಿ ಸವಿತಾ ಮಂಜುನಾಥ್,ಶ್ರೀ ಡಾ ಅಭಯ್ ಕುಮಾರ್,ಶ್ರೀಮತಿ ಅಂಬಿಕಾ,ಶ್ರೀ ಪ್ರಸನ್ನ ಕುಮಾರ್,
ಶ್ರೀಮತಿ ರೂಪ ಶಾಂತರಾಜ್,
ಶ್ರೀ ವಿಜಯ ಗುರುರಾಜ್,ಶ್ರೀಮತಿ ಆರ್ನವಿ ಕಾಂಚನ, ಶ್ರೀಮತಿ. ಶೈಲಜ ಕೆ.ವಿ, ಶ್ರೀಮತಿ ಹೊನ್ನಮ್ಮ ಇವರಿಗೆ ನೀಡಿ ಗೌರವಿಸಲಾಗುವದು.ಇದೇ ವೇಳೆ
ಶ್ರೀ ದುಗಾರ್ಂಬಿಕಾ ಸೋಖಾನ ಕಲಾ ತಂಡ, ಕುರುಬರಹಳ್ಳಿ ಚಿತ್ರದುರ್ಗ ಜಿಲ್ಲೆ ಶ್ರೀ ನರಹರಿ ಭಜನಾ ಮಂಡಳಿ, ಕುರುಬರಹಳ್ಳಿ ಚಿತ್ರದುರ್ಗ ಜಿಲ್ಲೆ ಗಾಯನ ತಂಡಗಳು ಪಾಲ್ಗೊಂಡು ತಮ್ಮ ಕಲೆ ಪ್ರದರ್ಶಿಸುವರು.
ಕವಿಗೋಷ್ಠಿಯಲ್ಲಿ
ಆನಂದ್ ಸಿ. ತಿರುಮಲ, ಶ್ರೀವಾಣಿ ಎಂ ಬಿ, ರಾಜೇಂದ್ರ ಹೆಗಡೆ,
ಹೇಮಲತಾ,ವಿಜಯ ಗುರುರಾಜ್,ಶಾಂತ ಕೆ ಟಿ, ಕುಮಾರಿ ಕೋಮಲ,ಹೆಚ್ ಪ್ರಸನ್ನ ಕುಮಾರ್, ಬಿ ಶರಣಪ್ಪ ಚಾರಿ, ವಸಂತ ಜಗದೀಶ್, ರತ್ನಮಾಲ ಜಂಬಲಗಿ, ಸೌಭಾಗ್ಯ ರಾಂಪುರ, ಅಜಯ್ ಕುಮಾರ್ ಎಂಆರ್,
ಶೈಲಜಾ ಕೆ.ವಿ ಜೈಪುರ ಪಾಲ್ಗೊಳ್ಳುತ್ತಾರೆ.

9th July 2026
ಬೆಂಗಳೂರು: ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲೆಯ ಸಾಹಿತಿ ಸಿ.ವಾಯ್.ಮೆಣಸಿನಕಾಯಿ ಅವರು 2026ನೇ ಸಾಲಿನ 'ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಸಿ.ವಾಯ್.ಮೆಣಸಿನಕಾಯಿ ಅವರು ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಲವು ಕಾಲೇಜುಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಕನ್ನಡಮ್ಮ ದಿನಪತ್ರಿಕೆ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಕಳೆದ ೨೫ ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಮಕ್ಕಳ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕ ಅಧ್ಯಕ್ಷರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಆಸಕ್ತಿಯನ್ನು ಹೊಂದಿ ಈಗಾಗಲೇ ವಿಚಾರವಾಣಿ, ಕರುಣೆಯ ತೋಟ, ಅಗ್ನಿ ಪರೀಕ್ಷೆ, ಕಾಲಚಕ್ರ, ಬಾಳು ಬಂಗಾರ ಮತ್ತಿತರ ಕಥೆಗಳು, ಮೇರು ಸಾಧಕರು ಮತ್ತು ಐತಿಹಾಸಿಕ ಸ್ಥಳಗಳು, ಅಂಗಳದ ಗುಲಾಬಿ, ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ, ಮನದ ಮಾತು. ಭೋಜರಾಜನ ಪುನರ್ಜನ್ಮ ಇನ್ನಿತರ ಕಥೆಗಳು, ನಾ ಹೋದರೆ ನಿನಗೆ ಸುಖ ಸಾಹಿತ್ಯ ಸಂಪದ ಸೇರಿದಂತೆ ೧೫ ಕೃತಿಗಳನ್ನು ರಚಿಸಿದ್ದಾರೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ.
ಅವರ ಬಹುಮುಖ ಪ್ರತಿಭೆ, ಸಾಂಸ್ಕೃತಿಕ ಸಾಧನೆ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿನ ಕೊಡುಗೆ ಹಾಗೂ ಸಮಾಜಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ (ರಿ.) ಹಾಗೂ ಜನ ಸೇವಾ ಟ್ರಸ್ಟ್ (ರಿ.) ಸಹಯೋಗದಲ್ಲಿ ದಿ. ೧೨ ರಂದು ಆಯೋಜಿಸಿರುವ 'ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ' ಕಾರ್ಯಕ್ರಮದಲ್ಲಿ ಅವರಿಗೆ 2026ನೇ ಸಾಲಿನ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಜುಲೈ 12ರಂದು ಬೆಳಿಗ್ಗೆ 10:30 ಗಂಟೆಗೆ, ಶ್ರೀ ಸಿದ್ದಗಂಗಾ ಪ್ರಶಾಂತಾಲಯ, ರಾಜಾಜಿನಗರ, ಬೆಂಗಳೂರು ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮೀಜಿಗಳು ವಹಿಸಲಿದ್ದು, ನಾಟಕ ಅಕಾಡೆಮಿ ಮಾಜಿ ಸದಸ್ಯ, ನಾಟಕ ನಿರ್ದೆಶಕ ಸಿ.ಎಂ.ತಿಮ್ಮಯ್ಯ, ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ (ರಿ.) ಅಧ್ಯಕ್ಷರಾದ ಬಿ.ವಿ. ಪೂರ್ಣಿಮಾ ಬಾಬು, ಜನ ಸೇವಾ ಟ್ರಸ್ಟ್ (ರಿ.) ಪದಾಧಿಕಾರಿಗಳು, ವಿವಿಧ ಗಣ್ಯರು, ಸಮಾಜಮುಖಂಡರು, ಶಿಕ್ಷಣತಜ್ಞರು, ಕಲಾವಿದರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

9th July 2026
ಬೆಳಗಾವಿ
ಬೆಳಗಾವಿ ತಾಲೂಕಿನ ಹಾಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ. ರಶ್ಮಿ. ವ್ಹಿ. ಇವರು ಗುರುವಾರ ಆಕಸ್ಮೀಕ ಭೇಟಿ ನೀಡಿದ್ದರು.ಶಾಲೆಯ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಕ್ಕಳ ಚಟುವಟಿಕೆಗಳನ್ನು ಆಲಿಸಿದ ಜಯಕುಮಾರ, ಮಕ್ಕಳೊಂದಿಗೆ ಸಂವಾದ ನಡೆಸಿದರು. ಪ್ರಾರ್ಥನಾ ವೇಳೆಗೆ ಭೇಟಿ ನೀಡಿ ಹಾಲು ವಿವರಣೆ, ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ, ಹಾಗೂ ನಿರಂತರ ಹಾಜರಾತಿ,ಶಿಕ್ಷಕರ ಹಾಜರಾತಿ (ಕೆಎಎಮ್ಎಸ್) ಮಾಹಿತಿಯನ್ನು, ಶಾಲೆಯಲ್ಲಿ ಬಳಿಕೆಯಾಗುತ್ತಿರುವ ಸ್ಮಾರ್ಟ್ ಬೋರ್ಡ್ ಗಳ ವಿವರ ಪಡೆದು ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಂದರ್ಶನ ವೇಳೆ ಧಾರವಾಡದ ಅಪರ ಆಯುಕ್ತ ಡಾ. ಈಶ್ವರ. ಉಳ್ಳಾಗಡ್ಡಿ. ಜೆಡಿ. ಗಿರೀಶ್. ಪದಕಿ. ಡಿಡಿಪಿಐ ಶ್ರೀಮತಿ.ಲೀಲಾವತಿ. ಹಿರೇಮಠ. ಡಿವೈಪಿಸಿ ಬಸವರಾಜ. ವಿಲ್ಲಾನಟ್ಟಿ. ಅಶೋಕ ಕುಂಬಾರ ಬಿಇಓ ಪುಂಡಲೀಕ ಉಪಸ್ಥಿತರಿದ್ದರು.
ಫೋಟೋ ಶಿರ್ಷಕ್ :
ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ. ರಶ್ಮಿ. ವ್ಹಿ. ಇವರು ಹಾಲಗಾ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕ್ಷೀರಭಾಗ್ಯ ವಿಷಯಗಳ ಕುರಿತಂತೆ ಸಂವಾದ ನಡೆಸಿದರು.

3rd July 2026
ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಮುಖಿ ಬರಹಗಳ ಮೂಲಕ ಹೆಸರಾದ ಬೆಳಗಾವಿಯ ಹಿರಿಯ ಸಾಹಿತಿ ಸ.ರಾ.ಸೂಳಕೂಡೆ ನಮ್ಮ ನಿಮ್ಮೆಲ್ಲರ ನಡುವಿನ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದ ನಿವಾಸಿ ನಿವೃತ್ತ ಶ್ರೀ ಸತ್ಯಪ್ಪ ರಾಮಪ್ಪ ಸುಳಕೂಡೆಯವರು(ಸ.ರಾ.ಸೂಳಕೂಡೆ) ಸೌಜನ್ಯ ಸ್ವಭಾವದೊಂದಿಗೆ ಎಲ್ಲರೊಂದಿಗೆ ಕಾಳಜಿಯುವತವಾಗಿ ಬೆರೆತು ಸಾಹಿತ್ಯಕ್ಕೊಂದು ಮುಕಟಮಣಿ ಯಾಗಿ ಹೊರಹೊಮ್ಮಿದ್ದಾರೆ. ಬೆಳಗಾವ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜೈನಾಪುರದವರು. ದಿನಾಂಕ ೧-೨-೧೯೫೨ ರಂದು ಜನಿಸಿದ ಇವರು ಎಂ.ಎಸ್ಸಿ. ಎಲ್ಎಲ್.ಬಿ (ಸ್ಪೇಶಲ್) ಪದವೀಧರರು. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆರೋಗ್ಯ, ವಯಸ್ಕರ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ. ನೀರಾವರಿ ಇಲಾಖೆಗಳಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉಪನಿರ್ದೆಶಕರು (ಸಾಂಖ್ಯಿಕ) ನೀರಾವರಿ ನಿಗಮ ನಿಯಮಿತ ಉತ್ತರವಲಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ದಿನಾಂಕ: ೩೧-೧-೨೦೧೨ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ವೃತ್ತಿಯಲ್ಲಿದ್ದಾಗ ಇತರೇ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡವರು. ಕೆಲವು ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡವರು.
ಸಾಕ್ಷರತಾ ಸದನ ವಿಜಾಪುರ, ಸಂಪೂರ್ಣ ಸಾಕ್ಷಾರತಾ ಕಾರ್ಯಕ್ರಮದ ದಾಖಲಾ ಗುಮ್ಮಟ', 'ಅಕ್ಷರ ಪ್ರಭಾ', 'ಜ್ಞಾನ ಪ್ರಭಾ', 'ಗ್ರಾಮೀಣ ಭಾರತ'. ಪ್ರಭಾರ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಜಿಲ್ಲಾ ಪಂಚಾಯತಿ ಬೆಳಗಾವಿ. ಜಂಟೀ ನಿಬಂಧಕರು (ಕರ ವಸೂಲಾತಿ) ಕರ್ನಾಟಕ ನೀರಾವರಿ ನಿಗಮ ನಿಯಮಿತ ಉತ್ತರ ವಲಯ ಬೆಳಗಾವಿ. ಹೀಗೆ ಅನೇಕ ಇಲಾಖೆಗಳಲ್ಲಿ ಸೇವೆಗೈದು ಹೆಸರುವಾಸಿಯಾಗಿದ್ದಾರೆ. ಬೆಳಗಾವಿ 'ಹೊಂಬೆಳಕು' ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಲ್ಲದೆ ಇತರ ಸಂಸ್ಥೆಗಳ ಹಿತ ಚಿಂತಕರಾಗಿ ಮಾರ್ಗದರ್ಶನ ನೀಡುತ್ತಾ ಸದಾ ಯುವಕರಂತೆ ಒಂದಿಲ್ಲೊAದು ಕಾರ್ಯದಲ್ಲಿ ತೊಡಗಿರುತ್ತಾರೆ.
ಸಾಮಾಜಿಕ ಸೇವೆ:
ಬಯಲು ಸೀಮೆ ಸಾಹಿತ್ಯ ವೇದಿಕೆ ವಿಜಾಪುರ, ಸಮಾಜವಾದಿ ಗೆಳೆಯರ ಬಳಗ ವಿಜಾಪುರ, ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ, ಸ್ವದೇಶಿ ಆಂದೋಲನ ಬೆಳಗಾವಿ ಜಿಲ್ಲಾ ಘಟಕ ಬೆಳಗಾವಿ, ಕಿತ್ತೂರ ಚೆನ್ನಮ್ಮ ಸಾಂಸ್ಕೃತಿಕ ಸಂಘ ಬೆಳಗಾವಿ, ತನ್ಮಯ ಪ್ರಕಾಶನ ಬೆಳಗಾವಿ, ಪ್ರಸಾದ ಗ್ರಂಥ ಸಂಸ್ಥೆ ಬೆಳಗಾವಿ, ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಇವರ ಕಾವ್ಯ ವಾಚನ ಪ್ರಸಾರವಾಗಿವೆ. ಸುಮಾರು ಹದಿನೈದಕ್ಕೂ ಮಿಕ್ಕ ಚಿಂತನಗಳು ಮತ್ತು ಹಲವಾರು ವಿಷಯಗಳ ಕುರಿತು ಭಾಷಣಗಳು ಪ್ರಸಾರಗೊಂಡಿವೆ. ಸಾಕ್ಷರತಾ ಆಂದೋಲನದ ಸಾಕ್ಷಚಿತ್ರ ಆಕಾಶವಾಣಿ ಕೇಂದ್ರ ಧಾರವಾಡ ಮೂಲಕ ಬಿತ್ತರಗೊಂಡಿದೆ.
ಬರವಣಿಗೆ-
ಇವರು 'ಜೀವನ ಸಂಗ್ರಾಮ' 'ನನ್ನತನ', 'ಸಚೇತನ', ಮೊದಲಾದ ಸ್ವರಚಿತ. ಕವನ ಸಂಗ್ರಹಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ. ಅವುಗಳೆಂದರೆ, ೧. ಕಿತ್ತೂರು ಸಂಸ್ಥಾನ ಮತ್ತು ಸ್ವಾತಂತ್ರ್ಯ ಸಂಗ್ರಾಮ ೨. ಹೊಂಬೆಳಕು ೩. ಸಂಭ್ರಮ ೪. ಅಭಿಮಾನ ೫. ಬೆಳಗಾವಿ ಜಿಲ್ಲಾ ಬರಹಗಾರರ ಬೆಡಗು ೬. ಸಹಜ ೭. ಸಂಭ್ರಮ ೮. ಹೊಂಬೆಳಕು ೯. ಅಭಿಮಾನ ೧೦. ಬಂಗಾರ ಗುದ್ದಲಿ, ಇತ್ಯಾದಿಗಳು ಆಗಿವೆ. ಸತ್ಯದರ್ಶನ ಎಂಬ ಅವರ ಬದುಕು ಬರಹ ಬೃಹತ್ ಕೃತಿಯಲ್ಲಿ ಹಲವಾರು ಸಾಹಿತಿಗಳು, ಒಡನಾಡಿಗಳು ಅವರ ಬಗ್ಗೆ ವಿಷಯಗಳನ್ನು ಬರೆದಿದ್ದಾರೆ. ಇವರು ಸಾವಿರಾರು ಬಿಡಿ ಲೇಖನಗಳನ್ನೂ ಬರೆದಿದ್ದಾರೆ. ಇವರು ಸೇವೆಯಿಂದ ನಿವೃತ್ತಿಯಾದರೂ ಸಾಹಿತ್ಯ ಸೇವೆಗೆ ನಿವೃತ್ತಿ ಎಂಬುದಿಲ್ಲವೆAಬAತೆ ಇಂದಿಗೂ ವಿವಿಧ ಪತ್ರಿಕೆಗಗೆ ಲೇಖನ ಬರೆಯುತ್ತಾರೆ. ಇಂದಿಗೂ ನಿವೃತ್ತಿ ಜೀವನದಲ್ಲೂ ಹುಮ್ಮಸ್ಸಿನಿಂದ ಕೃತಿ ರಚಿಸಿ ಓದುಗರಿಗೆ ನೀಡುತ್ತಿದ್ದಾರೆ. ಅವರ ಕೃತಿಗಳಲ್ಲಿ ಆಸಕ್ತಿಯ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುತ್ತವೆ. ಪ್ರಮುಖವಾದ ಸಾಹಿತ್ಯ ಕೃತಿಗಳೆಂದರೆ, ೧. ಮನಕ್ಕೆ ಮನವೇ ಸಾಕ್ಷಿ ೨. ಅಂತರAಗದ ಅನ್ವೇಷಣೆ ೩. ಸಮಾಲೋಚನೆ ೪. ಬದುಕಿನ ಅನನ್ಯತೆ ಮತ್ತು ಆಧುನಿಕತೆ ೫. ಮಾನವ ಅಭಿವೃದ್ಧಿ ಸಾಧನೆ ಮತ್ತು ಸವಾಲುಗಳು ೬ ಸತ್ಯ ಮತ್ತು ಸಮಕಾಲೀನ ಸಮಾಜ ೭ ಗ್ರಾಮೀಣಾಭಿವೃದ್ಧಿಯ ಪ್ರಾಮುಖ್ಯತೆ ೮. ವಚನ ಸಂಗಮದ ಶೀಲ ಆಚಾರಗಳ ಪರಿಕಲ್ಪನೆ ೯. ಸಮುದಾಯ ಸಾಕ್ಷರತೆ ೧೦. ವಚನಗಳಲ್ಲಿ ಶೀಲ ಆಚಾರಗಳ ಪರಿಕಲ್ಪನೆ ೧೧. ಸಮುದಾಯ ಆರೋಗ್ಯ ಮತ್ತು ಸಂಖ್ಯಾಶಾಸ್ತ್ರ ೧೨. ದರ್ಶನ-ನಿದರ್ಶನ ೧೩. ಸಮಯೋಚಿತ ದರ್ಶನ ೧೪. ಸಹಜವೆಂಬುವ ಭಾವ. ೧೫. ಜನನ ಮರಣಗಳ ನೋಂದಣಿಯ ಮಹತ್ವ ೧೬. ಮಾಹಿತಿ ಹಕ್ಕಿನ ಮಹತ್ವ, ಮೊದಲಾದವುಗಳು
ಕಥಾ ಸಂಕಲನಗಳು: ೧. ಸರಳ ಕಥೆಗಳು ೨. ಹದಿನೇಳು ಆನೆಗಳು ೩. ತಿಳಿದುಕೊಳ್ಳಿ ತಿಳಿಯುವಂತೆಯೂ ಮಾಡಿ ಸೇರಿದಂತೆ ನವಸಾಕ್ಷರ ಕೃತಿಗಳು - ೧೬ ಮಕ್ಕಳ ಸಾಹಿತ್ಯ-೨, ಕಾನೂನು ಸಾಹಿತ್ಯ ೧೨, ಸಂಪಾದನೆ ಗ್ರಂಥಗಳು-೧೧ ಪ್ರಕಟಗೊಂಡಿವೆ. ಅವರು ಇಲ್ಲಿಯವರೆಗೆ ಸುಮಾರು ೧೩೫ ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದಾರೆ. ನಾಡಿನ ಪ್ರಖ್ಯಾತ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿವೆ.
ಪ್ರತಿಭಾವಂತರಾದ ಇವರಿಗೆ ದೊರೆತ ಪ್ರಶಸ್ತಿ ಗಳ ಸಂಖ್ಯೆಯೂ ದೊಡ್ಡದಿದೆ. ಶ್ರೀಯುತರಿಗೆ ಈ ಕೆಳಗಿನ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
೧. 'ಹೊಸತು' ಪತ್ರಿಕೆ ಆಯ್ದ ಲೇಖನಕ್ಕೆ ಎಚ್.ಎಂ.ಟಿ. ಪ್ರಶಸ್ತಿ.
೨. ಪ್ರಸಾರಭಾರತಿ ಮತ್ತು ನವಕರ್ನಾಟಕ ಪಬ್ಲಿಕೇಶನ್ದ ಪುಸ್ತಕ ವಿಮರ್ಶಾ ಸ್ಪರ್ಧೆಯಲ್ಲಿ, ಪ್ರಥಮ, ದ್ವಿತೀಯ, ತೃತೀಯ, ಪ್ರಶಸ್ತಿ,
೩. ಸಾಕ್ಷರತಾ ಪ್ರಬಂಧಕ್ಕೆ ಮಾನವ ಸಂಪನ್ಮೂಲ ಇಲಾಖೆಯ ಪ್ರಶಸ್ತಿ.
೪. ಸಂಚಯ ಸಾಹಿತ್ಯ ಪ್ರಶಸ್ತಿ (೨೦೦೨) ೫. ಅಂತರAಗ ಅನ್ವೇಷಣೆ ಕೃತಿಗೆ ಅಮರಮ್ಮ ಚೆನ್ನಬಸಪ್ಪ ಬೆಟದೂರ ಪ್ರಶಸ್ತಿ, ೬. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉತ್ತಮ ಸೇವಾ ಪ್ರಶಸ್ತಿ.
ಅಲ್ಲದೆ ೭೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಅಕ್ಷರ ಪ್ರಭಾ ಸಮಿತಿ ಬೆಳಗಾವಿ, ಬಸವ ಸಮಿತಿ ಬೆಂಗಳೂರು ಸನ್ಮಾನಿಸಿವೆ. ಇನ್ನೂ ನೂರಾರು ಕಡೆಯಲ್ಲಿ ಇವರ ಅಭಿಮಾನಿಗಳು ಇವರನ್ನು ಅಭಿನಂದಿಸಿ, ಗೌರವಿಸಿದ್ದಾರೆ. ಹಲವಾರು ಪ್ರತಿಭಾ ಪುರಸ್ಕಾರಗಳನ್ನು ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರೆನಿಸಿದ್ದಾರೆ. ಇಂದಿಗೂ ಬೆಳಗಾವಿಯ ಹಲವಾರು ಸಮ್ಮೇಳನ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಣಿವರಿಯದ ಮಾಂತ್ರಿಕರಾದ ಸುಳಕೂಡೆ ಅವರ ಲೇಖನ, ಕವನ, ಪ್ರಬಂಧಗಳನ್ನು ಓದಿದವರಲ್ಲಿ ದನ್ಯತಾಭಾವ ಮೂಡುತ್ತದೆ. “ಜನಸೇವೆಯೇ ಜನಾರ್ದನನ ಸೇವೆ"ವೆಂಬAತೆ ಸರಳ ಸಾದಾ ನಡೆನುಡಿಯನ್ನು ಒಳಗೊಂಡ ಇವರ ಜೀವನ ಶೈಲಿ ನಿಜಕ್ಕೂ ಮೆಚ್ಚುವಂತಹದ್ದಾಗಿದೆ.
ಇವರ ಬದುಕು ಹಸನವಾಗಲಿ, ಎಲ್ಲ ವರ್ಗದ ಸಾಹಿತ್ಯಾಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ನಿರಂತರ ನಮ್ಮೊಂದಿಗೆ ನೂರು ಕಾಲ ಬಾಳಿ ಬದುಕಲೆಂದು ಶುಭ ಹಾರೈಸುತ್ತೇನೆ.
ಲೇಖನ- ಸಿ.ವಾಯ್.ಮೆಣಸಿನಕಾಯಿ, ಸಾಹಿತಿಗಳು
ಪೋಸ್ಟ- ನೇಸರಗಿ ತಾಲೂಕ- ಬೈಲಹೊಂಗಲ ಜಿಲ್ಲೆ- ಬೆಳಗಾವಿ
ಮೊ-೮೦೫೦೧೬೮೫೦೪